ಪಾರಮಾರ್ಥಿಕ - 
ಪರಮ ಅಂದರೆ ಉತ್ಕøಷ್ಟವಾದ ಅಥವಾ ಮುಖ್ಯವಾದ ಅರ್ಥವೇ ಪರಮಾರ್ಥ. ಅರ್ಥಶಬ್ದಕ್ಕೆ ಪ್ರಯೋಜನ, ವಸ್ತು ಅಭಿಪ್ರಾಯ ಮುಂತಾದ ಅರ್ಥಗಳಿವೆ. ಮೊದಲನೆಯ ಅರ್ಥದಲ್ಲಿ ಪರಮಾರ್ಥವೆಂದರೆ ಪರಮ ಪ್ರಯೋಜನವೆಂದು ಪರಿಗಣಿಸಲು ಅರ್ಹವಾದ ನಿರತಿಶಯಸುಖಪ್ರಾಪ್ತಿ ಮತ್ತು ಆತ್ಯಂತಿಕ ದುಃಖ ನಿವೃತ್ತಿ. ಇದೇ ಶ್ರೇಯಸ್ಸು, ಪರಮ ಪುರುಷಾರ್ಥ ಅಥವಾ ಮೋಕ್ಷ ಎನಿಸಿಕೊಳ್ಳುವುದು. ಎರಡನೆಯ ಅರ್ಥದಲ್ಲಿ ಉತ್ಕøಷ್ಟವಾದ ವಸ್ತು ಅಂದರೆ ಪರಬ್ರಹ್ಮವೇ ಪರಮಾರ್ಥವೆನಿಸುತ್ತದೆ. ಮೂರನೆಯ ಅರ್ಥದಲ್ಲಿ ಪರಮಾರ್ಥವೆಂದರೆ ಪರಮಸತ್ಯ. ಇದರಿಂದ ನಿತ್ಯಸತ್ಯವಾದ ಬ್ರಹ್ಮಜ್ಞಾನವೂ ಪರಮಾರ್ಥವೇ. ಅರ್ಥ ಶಬ್ದವನ್ನು ಐಶ್ವರ್ಯ ಎಂದು ಗ್ರಹಿಸುವುದಾದರೂ ಪರಮಾರ್ಥವೇ ಅಂದರೆ ಪರಬ್ರಹ್ಮಜ್ಞಾನವೇ ಪರಮೈಶ್ವರ್ಯ. ಪರಮಾರ್ಥ ಶಬ್ದವನ್ನು ಸತ್ಯ, ನಿಜ ಎಂಬ ಸಾಮಾನ್ಯಾರ್ಥದಲ್ಲೂ ಬಳಸುವುದುಂಟು. ಉದಾ ಉವಾಚ ಚೈನಂ ಪರಮಾರ್ಥತೋ ಹರಂ...... (ಕುಮಾರಸಂಭವ).

ಪರಮಾರ್ಥಾಯ (ಪರಮ ಪುರುಷಾರ್ಥಯ) ಹಿತಃ ಇತಿ ಪಾರಮಾರ್ಥಿಕಃ ಪರಮಾರ್ಥಕ್ಕೆ ಅಂದರೆ ಪರಮ ಪುರುಷಾರ್ಥಕ್ಕೆ (ಮೋಕ್ಷ) ಸೇರಿದ್ದು ಪಾರಮಾರ್ಥಿಕ. ಉದಾ. ಪಾರಮಾರ್ಥಿಕೀ ಭಗವಚ್ಚರಣಾರವಿಂದ ಶರಣಾಗತಿಃ (ಶ್ರೀರಾಮಾನುಜರ ಶರಣಾಗತಿಗದ್ಯ). ಸಾಮಾನ್ಯರ್ಥದಲ್ಲಿ ಪರಮಾರ್ಥಕ್ಕೆ ಅಂದರೆ ಸತ್ಯಕ್ಕೆ ಸಂಬಂದಿಸಿದ್ದು ಪಾರಮಾರ್ಥಿಕ. ಉದಾ ನ ಲೋಕಃ ಪಾರಮಾರ್ಥಿಕಃ.

ಅದ್ವೈತ ವೇದಾಂತದಲ್ಲಿ ಹೇಳುವ ಮೂರು ವಿಧ ಸತ್ತೆಗಳಲ್ಲಿ (ಇರುವಿಕೆ) ಪಾರಮಾರ್ಥಿಕ ಸತ್ತೆಯೂ ಒಂದು. (ಸತ್ತಾ ತ್ರಿವಿಧಾ-ಪಾರಮಾರ್ಥಿಕೀ, ವ್ಯಾವಹಾರಿಕೀ ಪ್ರಾತೀತಿಕಿ). ಪರಮಾರ್ಥ ಅಥವಾ ಪಾರಮಾರ್ಥಿಕ ಸತ್ಯ ಬೌದ್ಧದರ್ಶನದಲ್ಲಿ ಸಂವೃತ ಸತ್ಯಕ್ಕೆ (ಅಂದರೆ ವ್ಯಾವಹಾರಿಕ ಸತ್ಯಕ್ಕೆ) ಪ್ರತಿಕೋಟಿ. ಅದ್ವೈತಿಗಳಿಗೂ ಈ ಪರಿಭಾಷೆ ಗ್ರಾಹ್ಯವಾದದ್ದೇ.
(ಎಸ್.ಆರ್‍ಎಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ